ಕ್ಯಾಲಿಫೋರ್ನಿಯ, ಕೆಳಗಿನ

ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾಲಿಫೋರ್ನಿಯ ರಾಜ್ಯಪ್ರದೇಶದ ಮುಂದುವರಿದ ಭಾಗ; ಪರ್ಯಾಯ ದ್ವೀಪ. ಮೆಕ್ಸಿಕೋ ದೇಶಕ್ಕೆ ಸೇರಿದ. ಇದಕ್ಕೆ ಬಾಹಾ ಕ್ಯಾಲಿಫೋರ್ನಿಯ ಎಂದೂ ಹೆಸರಿದೆ. ವಿಸ್ತೀರ್ಣ 55,634 ಚ.ಮೈ. ಉ.ಅ.280ಗೆ ಉತ್ತರದ ಭಾಗ ಒಂದು ರಾಜ್ಯ, ಇದರ ಜನಸಂಖ್ಯೆ 5,20,913 (1960). ದಕ್ಷಿಣ ಭಾಗ ಮೆಕ್ಸಿಕೋ ಸಂಯುಕ್ತ ರಾಜ್ಯದ ಪ್ರದೇಶ; ಇದರ ಜನಸಂಖ್ಯೆ 83,433. ಕೆಳ ಕ್ಯಾಲಿಫೋರ್ನಿಯದ ಉದ್ದ 760 ಮೈ., ಅಗಲ 30-150 ಮೈ. ಉತ್ತರದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾಲಿಫೋರ್ನಿಯ ರಾಜ್ಯ. ಪಶ್ಚಿಮ ಮತ್ತು ದಕ್ಷಿಣಕ್ಕೆ ಪೆಸಿಫಿಕ್ ಸಾಗರ, ಪೂರ್ವ ತೀರಕ್ಕೂ ಮೆಕ್ಸಿಕೋ ಮುಖ್ಯಭೂಪ್ರದೇಶದ ತೀರಕ್ಕೂ ನಡುವೆ ಕ್ಯಾಲಿಫೋರ್ನಿಯ ಖಾರಿ ಇವೆ. ಆ ಖಾರಿಯನ್ನು ಕಾರ್ಟೆಸ್ ಸಮುದ್ರವೆಂದೂ ಕರೆಯುತ್ತಾರೆ. ಕ್ಯಾಲಿಫೋರ್ನಿಯ ಖಾರಿಗೆ ಉತ್ತರದಲ್ಲಿ, ಅಮೆರಿಕ ಸಂಯುಕ್ತಸಂಸ್ಥಾನದ ಗಡಿಯ ದಕ್ಷಿಣಕ್ಕೆ ಇರುವ ಕಿರಿದಾದ ಪ್ರದೇಶದ ಮೂಲಕ ಇದಕ್ಕೂ ಮೆಕ್ಸಿಕೋ ದೇಶದ ಉಳಿದ ಭಾಗಕ್ಕೂ ಸಂಪರ್ಕವಿದೆ.

ಭೌತಲಕ್ಷಣ: ಕ್ಯಾಲಿಫೋರ್ನಿಯದ ಸ್ಯಾನ್ ಜಸಿಂಟೋ ಪರ್ವತಶ್ರೇಣಿಯೇ ಕೆಳ ಕ್ಯಾಲಿಫೋರ್ನಿಯದಲ್ಲೂ ಪರ್ವತಗುಚ್ಛವಾಗಿ ಮುಂದುವರಿದಿದೆ; ಕ್ಯಾಲಿಫೋರ್ನಿಯ ಖಾರಿಯ ಪಕ್ಕದಲ್ಲೇ ಕೊನೆಯವರೆಗೂ ಸಾಗಿದೆ. ಸಮುದ್ರದಿಂದ ಥಟ್ಟನೆ ಎತ್ತರಕ್ಕೇರುವ ಈ ಶ್ರೇಣಿಗೆ ಒಂದೊಂದು ಕಡೆ ಒಂದೊಂದು ಹೆಸರುಂಟು. ಸ್ಯಾನ್ ಪ್ರೇದ್ರೋ ಮಾರ್ಟಿರ್ ಶ್ರೇಣಿಯಲ್ಲಿರುವ ಒಂದು ಶಿಖರ ಲಾ ಎನ್ಕಾಂತಾದಾ (10,069') ನಡುಭಾಗದಲ್ಲಿರುವ ಲಾಸ್ ತ್ರೆಸ್ ವರ್ಜೀನ್ಸ್ ಒಂದು ಮೃತಪಟ್ಟ ಅಗ್ನಿಪರ್ವತ. ಕ್ಯಾಲಿಫೋರ್ನಿಯ ಖಾರಿಯನ್ನು ಸೇರುವ ಕಾಲೊರಾಡೋ ನದಿಯ ಮುಖಜಭೂಮಿ ಪ್ರದೇಶ ಬಹಳ ಫಲವತ್ತಾದ್ದು. ಕೆಳ ಕ್ಯಾಲಿಫೋರ್ನಿಯದ ಈಶಾನ್ಯ ಭಾಗದಲ್ಲಿರುವ ಈ ಪ್ರದೇಶಕ್ಕೆ ಮೆಹಿಕಾಲಿ ಕಣಿವೆ ಎಂದು ಹೆಸರು ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಈ ಕಣಿವೆ ಮುಂದುವರಿಯುತ್ತದೆ. ಅಲ್ಲಿ ಇದಕ್ಕೆ ಇಂಪೀರಿಯಲ್ ಕಣಿವೆ ಎಂದು ಹೆಸರು. ಕೆಳ ಕ್ಯಾಲಿಫೋರ್ನಿಯದ ಉತ್ತರ ಭಾಗದಲ್ಲಿ ಚಿನ್ನದ ನಿಕ್ಷೇಪಗಳಿವೆ; ಮಧ್ಯದಲ್ಲಿ ತಾಮ್ರ ಮತ್ತು ಕಬ್ಬಿಣ ಅದುರುಗಳೂ ದಕ್ಷಿಣದಲ್ಲಿ ಬೆಳ್ಳಿಯೂ ಸಿಗುತ್ತವೆ. ಕಾಗೆಬಂಗಾರ, ಸತು, ಟಂಗ್ಸ್‍ಟನ್, ಮ್ಯಾಂಗನೀಸ್ ಮುಂತಾದ ಅನೇಕ ಲೋಹಗಳ ನಿಕ್ಷೇಪಗಳು ಇಲ್ಲುಂಟು.

ವಾಯುಗುಣ: ಶುಷ್ಕತೆ ಮತ್ತು ಅಧಿಕ ಉಷ್ಣತೆ-ಇವು ಕೆಳ ಕ್ಯಾಲಿಫೋರ್ನಿಯದ ವಾಯುಗುಣದ ಲಕ್ಷಣಗಳು. ಇಲ್ಲಿಯ ಯಾವ ಭಾಗದಲ್ಲೂ ಮಳೆ ಹೆಚ್ಚಾಗಿ ಬೀಳುವುದಿಲ್ಲ. ವಾಯವ್ಯ ಭಾಗದಲ್ಲಿ ವರ್ಷದ ಸರಾಸರಿ ಮಳೆ 10". ಪರ್ವತಶ್ರೇಣಿಯಲ್ಲಿ ಹೆಚ್ಚು ಮಳೆಯಾಗುತ್ತದೆ. ವ್ಯವಸಾಯ ನೀರಾವರಿಯನ್ನವಲಂಬಿಸಬೇಕಾಗಿದೆ.

ಸಸ್ಯಗಳು, ಪ್ರಾಣಿಗಳು: ಮರುಭೂಮಿಯ ಸಸ್ಯವೈವಿಧ್ಯವನ್ನು ಇಲ್ಲಿ ಸಮೃದ್ಧಿಯಾಗಿ ಕಾಣಬಹುದು. ಪಾಪಾಸು, ಕತ್ತಾಳೆ ಮುಂತಾದ ಹಲವಾರು ಸಸ್ಯಗಳುಂಟು. ಉನ್ನತ ಪರ್ವತಗಳ ಇಳಿಜಾರುಗಳು ಪೈನ್ ಮರಗಳಿಂದ ಆವೃತವಾಗಿವೆ. 20ನೆಯ ಶತಮಾನದ ಪ್ರಾರಂಭದಲ್ಲಿ ಕಾಲೊರಾಡೋ ನದಿಯ ನೀರನ್ನು ಬಳಸಿಕೊಳ್ಳುವ ವ್ಯವಸ್ಥೆಯ ನಿರ್ಮಾಣವಾದ ಮೇಲೆ ಮೆಹಿಕಾಲಿ ಪ್ರದೇಶದ ಕೃಷಿ ಕೈಗಾರಿಕೆಗಳು ಬೆಳೆದುವು. ಕೆಳ ಕ್ಯಾಲಿಫೋರ್ನಿಯದ ದಕ್ಷಿಣಭಾಗಕ್ಕಿಂತ ಉತ್ತರಭಾಗ ಹೆಚ್ಚು ಅಭಿವೃದ್ಧಿ ಹೊಂದಿದೆ. ಜನಸಂಖ್ಯೆಯೂ ಅಲ್ಲಿ ಹೆಚ್ಚು. ಉತ್ತರ ದಕ್ಷಿಣ ಭಾಗಗಳು ಮರುಭೂಮಿಯಿಂದ ಬೇರ್ಪಟ್ಟಿರುವುದರಿಂದ ಅವು ಪ್ರತ್ಯೇಕವಾಗಿ ಜೀವನ ನಡೆಸುತ್ತಿವೆ. ಉತ್ತರ ಭಾಗದಲ್ಲಿರುವ ಮೆಹಿಕಾಲಿ ಪ್ರದೇಶದಲ್ಲಿ ಹತ್ತಿ ಒಂದು ಮುಖ್ಯ ಬೆಳೆ. ಗೋಧಿ, ಕುದುರೆ ಮಸಾಲೆ, ದ್ರಾಕ್ಷಿ, ಟೊಮಾಟೊ, ಕಲ್ಲಂಗಡಿ, ಲಿನ್ಸೀಡ್, ಮುಸುಕಿನ ಜೋಳ-ಇವು ಇತರ ಬೆಳೆಗಳು. ಅಮೆರಿಕ ಸಂಯುಕ್ತಸಂಸ್ಥಾನದೊಂದಿಗೆ ವ್ಯಾಪಾರ ನಡೆಯುತ್ತದೆ. ದಕ್ಷಿಣಭಾಗದಲ್ಲಿ ಗಣಿಗಾರಿಕೆ, ಪಶುಪಾಲನೆ, ಕೃಷಿ ನಡೆಯುತ್ತವೆ.

1931ರಲ್ಲಿ ಕೆಳ ಕ್ಯಾಲಿಫೋರ್ನಿಯ ಪ್ರದೇಶವನ್ನು ಉತ್ತರ-ದಕ್ಷಿಣ ರಾಜಕೀಯ ವಿಭಾಗಗಳಾಗಿ ವಿಂಗಡಿಸಲಾಯಿತು. ಕ್ಯಾಲಿಫೋರ್ನಿಯದ ಉತ್ತರಭಾಗ 1952ರಲ್ಲಿ ಮೆಕ್ಸಿಕೋ ದೇಶದ 29ನೆಯ ರಾಜ್ಯವಾಯಿತು. ದಕ್ಷಿಣಭಾಗ ಒಂದು ಪ್ರದೇಶವಾಗಿಯೇ ಉಳಿಯಿತು. ಪ್ರತ್ಯೇಕ ರಾಜ್ಯದ ಸ್ಥಾನ ಗಳಿಸಲು ಅವಶ್ಯವಾದ ಕನಿಷ್ಠ ಜನಸಂಖ್ಯೆಯನ್ನು ಅದು 1960ರಲ್ಲಿ ಮೀರಿತ್ತು. ಆಗ ಅದರ ಜನಸಂಖ್ಯೆ 83,433.

ಕೆಳ ಕ್ಯಾಲಿಫೋರ್ನಿಯದ ಉತ್ತರ ಭಾಗ ಕೃಷಿ ಕೈಗಾರಿಕೆಗಳಲ್ಲಿ ಮುಂದುವರಿದಿದೆ. ಅಮೆರಿಕ ಸಂಯುಕ್ತಸಂಸ್ಥಾನದೊಂದಿಗೆ ವ್ಯಾಪಾರ ಸಂಪರ್ಕವಿದೆ. ಅಲ್ಲಿ ಹತ್ತಿ, ಗೋಧಿ, ಕುದುರೆ ಮಸಾಲೆ, ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಮುಸುಕಿನ ಜೋಳ ಬೆಳೆಯಲಾಗುತ್ತದೆ. ಚಿನ್ನದ ಗಣಿಗಳಿವೆ. ದಕ್ಷಿಣದಲ್ಲಿ ಚಿನ್ನ, ಬೆಳ್ಳಿ, ಮತ್ತು ಕಬ್ಬಿಣ ದೊರಕುತ್ತವೆ. ಹೈನುಗಾರಿಕೆ ಸಂಸ್ಥೆಗಳಿವೆ, ದ್ರಾಕ್ಷಾರಸ ತಯಾರಿಸುತ್ತಾರೆ.

ಸಂಚಾರ-ಸಂಪರ್ಕ: ಕೆಳ ಕ್ಯಾಲಿಫೋರ್ನಿಯದ ಒಳ ಹೊರ ಸಾರಿಗೆ ವ್ಯವಸ್ಥೆಗಳು ಸಮರ್ಪಕವಾಗಿಲ್ಲದ್ದೇ ಅದು ಮೆಕ್ಸಿಕೋದ ಉಳಿದ ಭಾಗದಿಂದ ಪ್ರತ್ಯೇಕವಾಗಿಯೇ ಉಳಿಯಲು ಕಾರಣ. ಮೆಕ್ಸಿಕೋ ದೇಶ ಅದರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪ್ರಭಾವವನ್ನು ಬಹುಕಾಲ ಬೀರಲಿಲ್ಲ. ವಸಾಹತು ಕಾಲದಿಂದಲೂ ಇಲ್ಲಿ ಸುವ್ಯವಸ್ಥಿತ ರಸ್ತೆಗಳಿರಲಿಲ್ಲ. ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿತ್ತು. 1940ರ ದಶಕದಲ್ಲಿ ಉತ್ತರ ಭಾಗದಲ್ಲಿ ಹೆದ್ದಾರಿಗಳ ನಿರ್ಮಾಣ ಪ್ರಾರಂಭವಾಯಿತು. ಅಮೆರಿಕ ಸಂಯುಕ್ತಸಂಸ್ಥಾನದ ಗಡಿಯ ಬಳಿಯಲ್ಲಿ ಮಾತ್ರ ರೈಲುಮಾರ್ಗಗಳಿವೆ. ಟಿಹ್ವಾನಾ ಮತ್ತು ಆಲ್ಗೊಡೋನೆಸ್ ನಗರಗಳಿಂದ ಮೆಹಿಕಾಲಿಗೂ ಅಲ್ಲಿಂದ ಅಮೆರಿಕ ಸಂಯುಕ್ತಸಂಸ್ಥಾನಕ್ಕೂ ರೈಲುಮಾರ್ಗಗಳಿವೆ. ಮೆಹಿಕಾಲಿಯಿಂದ ಮೆಕ್ಸಿಕೋದ ಮುಖ್ಯ ಭೂಭಾಗಕ್ಕೆ 1950ರಲ್ಲಿ ರೈಲ್ವೆಸಂಪರ್ಕ ಏರ್ಪಟ್ಟಿತು. ಕೆಳ ಕ್ಯಾಲಿಫೋರ್ನಿಯ ತೀರದಿಂದ ಮೆಕ್ಸಿಕೋ ತೀರಕ್ಕೆ ನೌಕೆಗಳು ಸಂಚರಿಸುತ್ತವೆ. ಕೆಳ ಕ್ಯಾಲಿಫೋರ್ನಿಯದ ದಕ್ಷಿಣಪ್ರದೇಶದಿಂದ ಮೆಕ್ಸಿಕೋ ಪೆಸಿಫಿಕ್ ತೀರ ಮತ್ತು ಖಾರಿ ತೀರಕ್ಕೆ ಹೆಚ್ಚಿನ ನೌಕಾಸಂಪರ್ಕ ಏರ್ಪಟ್ಟಿದೆ. ಕೆಳ ಕ್ಯಾಲಿಫೋರ್ನಿಯ ಕರಾವಳಿ ಸು.2,000 ಮೈ. ಉದ್ದವಾಗಿದ್ದರೂ ಅಲ್ಲಿ ಒಳ್ಳೆಯ ಬಂದರುಗಳು ಹೆಚ್ಚಾಗಿಲ್ಲ.

ಕೆಳ ಕ್ಯಾಲಿಫೋರ್ನಿಯ ರಾಜ್ಯದ ರಾಜಧಾನಿ ಮೆಹಿಕಾಲಿ (1,71,648). ಟಿಹ್ವಾನಾ (1,37,644) ಮತ್ತು ಎನ್ಸೆನಾಡಾ ಇನ್ನೆರಡು ಪಟ್ಟಣಗಳು. ದಕ್ಷಿಣ ಪ್ರದೇಶದ ರಾಜಧಾನಿ ಲಾ ಪಾಸ್ (23,252). ಸಾಂತ ರೋಸಲಿಯ ಎಂಬುದು ಗಣಿ ಜಿಲ್ಲೆಯೊಂದರ ಕೇಂದ್ರ.

ಇತಿಹಾಸ

ಕೆಳ ಕ್ಯಾಲಿಫೋರ್ನಿಯವನ್ನು ಮೊದಲಿಗೆ ಕಂಡವರು ಸ್ಟ್ಯಾನಿಷರು-1533ರಲ್ಲಿ. ಸ್ಥಳೀಯ ಇಂಡಿಯನರ ವಿರೋಧದಿಂದಾಗಿ ಇಲ್ಲಿ ವಸತಿಸ್ಥಾಪನೆಯ ಪ್ರಥಮ ಪ್ರಯತ್ನಗಳು ವಿಫಲವಾದುವು. ತರುವಾಯ ಬಹುಕಾಲ ಈ ಪ್ರಾಂತ್ಯಕ್ಕೆ ಹೊರಗಿನ ಜನ ಬರಲಿಲ್ಲ. 1667ರಲ್ಲಿ ರೋಮನ್ ಪಾದ್ರಿಗಳು ಜಾನ್ ಮಾರಿಯಾ ಸಾಲ್ವಟಿಯೆರ್ರಾನ ನಾಯಕತ್ವದಲ್ಲಿ ಅಲ್ಲಿಗೆ ಬಂದು ನೆಲಸಿ ಲೊರೇಟೊ ನಗರವನ್ನು ಸ್ಥಾಪಿಸಿದರು. 1824ರ ವರೆಗೆ ಈ ನಗರ ಪರ್ಯಾಯದ್ವೀಪದ ಕೇಂದ್ರವಾಗಿತ್ತು. ರೋಮನ್ ಪಾದ್ರಿಗಳು ಇಲ್ಲಿಯ ಆದಿವಾಸಿಗಳಿಗೆ ಶಿಕ್ಷಣ ಕೊಟ್ಟರು. ಊಳಿಗ ಮಾನ್ಯ ಪದ್ಧತಿ ಜಾರಿಗೆ ಬಂತು. ಮೆಕ್ಸಿಕೋ-ಅಮೆರಿಕಗಳ ನಡುವೆ ಯುದ್ಧ ನಡೆದಾಗ (1847-48) ಕೆಳ ಕ್ಯಾಲಿಫೋರ್ನಿಯವನ್ನು ಅಮೆರಿಕನ್ ಸೈನ್ಯಗಳು ಆಕ್ರಮಿಸಿದುವು. ಆದರೆ ಗ್ವಾಡ್‍ಲೂಪ್-ಹಿಡ್ಯಾಲ್ಗೋ ಕೌಲಿನ ಪ್ರಕಾರ ಅಮೆರಿಕ ಸಂಯುಕ್ತಸಂಸ್ಥಾನ ಅದನ್ನು ಮೆಕ್ಸಿಕೋ ರಾಜ್ಯಕ್ಕೆ ಹಿಂದಿರುಗಿಸಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ (1939-45) ಇಲ್ಲಿಯ ಎನ್ಸೆನಾಡಾ ಮತ್ತು ಲಾ ಪಾಜ್ó ನಗರಗಳು ಸೇನಾಕೇಂದ್ರಗಳಾಗಿದ್ದುವು.			 	(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ